ಕೊಂಬು ಕೊಳಲನೂದುತ್ತ

ರಚನೆಕಾರ: ಶ್ರೀಪಾದರಾಜರು

ವರ್ಗ: ಶ್ರೀಕೃಷ್ಣ

ಕೊಂಬು ಕೊಳಲನೂದುತ್ತ ನಂಬಿಸಿ ಪೋದನೆಯವ್ವಾ
ಅಂಬುಜನಾಭಗೆ ಮನ ಹಂಬಲಿಸುತ್ತಿದೆಯವ್ವಾ || ಪ ||

ನಡೆಯಲಾರೆನೆಯವ್ವಾ ಅಡಿಯಿಡಲೊಶವಿಲ್ಲ
ಬೆಡಗುಗಾರನ ಕೂಡೆ ನುಡಿ ತೆರಳಿತ್ತೆಯವ್ವಾ || ೧ ||

ಮಾತು ಮನಸು ಬಾರದವ್ವಾ ಸೋತೆವವ್ವಾ ಕೃಷ್ಣಗಾಗಿ
ಆತನ ಕಾಣದೆ ಮನ ಕಾತರಿಸುತಿದೆಯವ್ವಾ || ೨ ||

ಅನ್ನೋದಕ ಒಲ್ಲೆವವ್ವಾ ಕಣ್ಣಿಗೆ ನಿದ್ರೆ ಬಾರದು
ಮನ್ನಣೆಗಾರನ ಕೂಡೆ ಹೆಣ್ಣು ಜನ್ಮ ಸಾಕೆಯವ್ವಾ || ೩ ||

ಮನೆಮನೆ ವಾರುತೆಗೆ ಮನವೆಳಸದೆಯವ್ವಾ
ಮನಸಿಜಪಿತನೊಡನೆ ಮನ ತೆರಳಿತೆಯವ್ವಾ || ೪ ||

ಗೋಪಮ್ಮನ ವಾರುತೆಗೆ ತಾಪ ಹಿರಿಯದಾಯಿತವ್ವಾ
ಗೋಪಜನರ ಕೂಡಿದ ಶ್ರೀಪತಿ ರಂಗವಿಠಲಾ || ೫ ||