ಕುಲ ಕುಲವೆಂದು

ರಚನೆಕಾರ: ಕನಕದಾಸರು

ವರ್ಗ: ಶ್ರೀಕೃಷ್ಣ

ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ
ಕುಲದ ನೆಲೆಯನೇನಾದರು ಬಲ್ಲಿರಾ || ಪ ||

ಹುಟ್ಟಿದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲ
ಗುಟ್ಟು ಕಾಣಿಸಬಂತು ಹಿರಿದೆನು ಕಿರಿದೆನು
ನೆಟ್ಟನೆ ಸರ್ವಜ್ಞನ ನೆನೆಕಂಡ್ಯ ಮನುಜಾ || ೧ ||

ಜಲವೇ ಸಕಲ ಕುಲಕ್ಕೆ ತಾಯಲ್ಲವೆ
ಜಲದ ಕುಲವನೆನಾದರೂ ಬಲ್ಲಿರಾ
ಜಲದ ಬೊಬ್ಬುಳಿಯಂತೆ ಸ್ಥಿರವಿಲ್ಲವೀ ದೇಹಾ
ನೆಲೆಯರಿತು ನೀ ನೆನೆಕಂಡ್ಯ ಮನುಜಾ || ೨ ||

ಹರಿಯೇ ಸರ್ವೋತ್ತಮ ಹರಿಯೇ ಸರ್ವೇಶ್ವರ
ಹರಿಮಯವೆಲ್ಲವೆನುತ ತಿಳಿದು
ಸಿರಿ ಕಾಗಿನೆಲೆಯಾದಿಕೇಶವರಾಯನ
ಚರಣ ಕಮಲವನೇ ಅರ್ಜಿಸುವನೇ ಕುಲಜ || ೩ ||