ಕುರುಡು ನಾಯಿ ಸಂತೆಗೆ ಬಂತಂತೆ

ರಚನೆಕಾರ: ಶ್ರೀಪಾದರಾಜರು

ವರ್ಗ: ಉಪದೇಶಾತ್ಮಕ

ಕುರುಡು ನಾಯಿ ಸಂತೆಗೆ ಬಂತಂತೆ || ಪ ||

ಅದು ಯಾತಕೆ (ಯಾಕೆ) ಬಂತೋ || ಅ.ಪ. ||

ಖಂಡ ಸಕ್ಕರೆ ಹಿತವಿಲ್ಲವಂತೆ
ಖಂಡ ಎಲುಬು ಕಡಿದಿತಂತೆ
ಹೆಂಡಿರ ಮಕ್ಕಳ ನೆಚ್ಚಿತಂತೆ
ಕೊಂಡು ಹೋಗುವಾಗ ಯಾರಿಲ್ಲವಂತೆ || ೧ ||

ಭರದಿ ಅಂಗಡಿ ಹೊಕ್ಕಿತಂತೆ
ತಿರುವಿ ದೊಣ್ಣೆಲಿ ಇಕ್ಕಿದರಂತೆ
ಮರೆತರಿನ್ನು ವ್ಯರ್ಥವಂತೆ
ನರಕದೊಳಗೆ ಬಿದ್ದಿತಂತೆ || ೨ ||

ವೇದಶಾಸ್ತ್ರವನೋದಿತಂತೆ
ಗಾದೆಯ ಮಾಡಿ ಬಿಟ್ಟಿತಂತೆ
ಹಾದಿ ತಪ್ಪಿ ನಡೆದು ಯಮನ
ಬಾಧೆಗೆ ತಾ ಗುರಿಯಾಯಿತಂತೆ || ೩ ||

ನಾನಾ ಜನ್ಮವನೆತ್ತಿತಂತೆ
ಮಾನವನಾಗಿ ಹುಟ್ಟಿತಂತೆ
ಕಾನನ ಕಾನನ ತಿರುಗಿತಂತೆ
ತಾನು ತನ್ನನೆ ಮರೆಯಿತಂತೆ || ೪ ||

ಮಂಗನ ಕೈಯ ಮಾಣಿಕ್ಯದಂತೆ
ಹಾಂಗೂ ಹೀಂಗೂ ಕಳೆದೀತಂತೆ
ರಂಗವಿಠಲನ ಮರೆತಿತಂತೆ
ಭಂಗ ಬಹಳ ಪಟ್ಟಿತಂತೆ || ೫ ||