ಮಂಗಲಂ ಜಯ ಮಂಗಲಂ

ರಚನೆಕಾರ: ಕನಕದಾಸರು

ವರ್ಗ: ಮಂಗಳಂ

ಮಂಗಲಂ ಜಯ ಮಂಗಲಂ ಮಂಗಲಂ ಜಯ ಮಂಗಲಂ || ಪ ||

ಅಂಧಕನನುಜನ ಕಂದನ ತಂದೆಯ ಕೊಂದವನ
ಶಿರದಲಿ ನಿಂದವನ
ಚೆಂದದಿ ಪಡೆದನ ನಂದನೆಯಳನೊಲವಿಂದದಿ
ಧರಿಸಿದ ಮುಕುಂದನಿಗೆ || ೧ ||

ರಥನಡರಿ ಸುರಪಥದಲಿ ತಿರುಗುವ
ಸುತನಿಗೆ ಶಾಪವನಿತ್ತವನ
ಖತಿಯನ್ನು ತಡೆದನ ಸತಿಯ ಜನನಿ ಸುತ
ಸತಿಯರನಾಳಿದ ಚತುರನಿಗೆ || ೨ ||

ಹರಿಯ ಮಗನ ಶಿರ ಹರಿದನ ತಂದೆಯ
ಹಿರಿಯ ಮಗನ ತಮ್ಮನ ಪಿತನ
ಭರದಿ ಭಕ್ಷಿಸುವನ ಶಿರದಲಿ ನಟಿಸಿದ
ವರಕಾಗಿನೆಲೆಯಾದಿಕೇಶವರಾಯಗೆ || ೩ ||