ಮರೆತೆಯೇನೋ ರಂಗಾ

ರಚನೆಕಾರ: ಕನಕದಾಸರು

ವರ್ಗ: ಶ್ರೀಕೃಷ್ಣ

ಮರೆತೆಯೇನೋ ರಂಗಾ ಮಂಗಳಾಂಗ
ತುರುಕರ ಕಾಯ್ವಲ್ಲಿ ತೊಂಡನಾಗಿದ್ದೆನ್ನ || ಪ ||

ಕೋಲು ಕೈಯಲಿ ಕೊಳಲು ಜೋಲು ಗಂಬಳಿ ಹೆಗಲ
ಮ್ಯಾಲೆ ಕಲ್ಲಿ ಚೀಲ ಕೊಂಕಳಲ್ಲಿ
ಕಾಲಗಡಗವನಿಟ್ಟು ಕಾಡೊಳಿಹ ಪಶುಹಿಂಡ
ಲಾಲಿಸುವ ಬಾಲಕರ ಮ್ಯಾಳದೊಳಗಿದ್ದೆನ್ನ || ೧ ||

ಕಲ್ಲು ಮಣಿ ಕವಡೆಯನು ಕಾಡೊಳಿಹ ಗುಲಗಂಜಿ
ಸಲ್ಲದೊಡವೆಯ ನೀನು ಸರ್ವಾಂಗಕೆ
ಅಲ್ಲಲ್ಲೆಸೆಯೆ ಧರಿಸಿ ನವಿಲಗರಿಗಳ ಗೊಂಡೆ
ಅಲ್ಲಿ ಗೊಲ್ಲರ ಕೂಡ ಚಲ್ಲಾಟ ಮಾಡುತಲಿ || ೨ ||

ಸಿರಿದೇವಿ ಬಂದು ಸೇರಿದ ಬಳಿಕ ಲೋಕದಲಿ
ಸಿರಿ ಅರಸನೆಂದು ಸೇವಕರರಿವರೋ
ಶರಣಾಗತರ ಪೊರೆವ ಶ್ರೀರಂಗವಿಠಲಯ್ಯ
ನರಸಿಂಗ ನೀನಿರುವ ಪರಿಯು ಮುಂದಿನ ಸಿರಿಯು || ೩ ||