ಮರೆಯದಿರು ಮರೆಯದಿರು ಮರುಳು ಮನುಜಾ

ರಚನೆಕಾರ: ಕನಕದಾಸರು

ವರ್ಗ: ವಿಷ್ಣು

ಮರೆಯದಿರು ಮರೆಯದಿರು ಮರುಳು ಮನುಜಾ
ನಾರಾಯಣನ ಸ್ಮರಣೆಯನು ಮಾಡು ಮನುಜಾ || ಪ ||

ರಂಗನಾಥನು ಇರಲು ಜಂಗುಳಿ ದೈವಗಳೇಕೆ
ತುಂಗಭದ್ರೆ ಇರಲಿಕ್ಕೆ ಬಾವಿ ಕೆರೆ ಏಕೆ
ಅಂಗನೆ ಸತಿ ಇರಲು ಬಣಗು ಹೆಣ್ಣುಗಳೇಕೆ
ಮಂಗಳಾತ್ಮನಿರಲಿಕ್ಕೆ ಅನ್ಯ ದೈವವೇಕೆ || ೧ ||

ಹಾಲು ಹಳ್ಳವಿರಲಿಕ್ಕೆ ವಾಳಿಯವ ತರಲೇಕೆ
ಮೇಲು ನಾಮವಿರಲಿಕ್ಕೆ ಕಟಕು ಇನ್ನೇಕೆ
ಬಾಲ ಹನುಮನಿರಲಿಕ್ಕೆ ಹುಲ್ಲು ಕಪಿಗಳು ಏಕೆ
ಮೇಲಾದ ತುಳಸಿ ಇರೆ ಕಗ್ಗೊರಲೆ ಏಕೆ || ೨ ||

ಚಿನ್ನದ ಗಿರಿ ಇರಲು ಕಬ್ಬಿಣದ ಮೊರಡಿ ಏಕೆ
ರನ್ನ ಮಾಣಿಕವಿರಲು ಗಾಜಿನ ಹರಳೇಕೆ
ಅನ್ನ ತುಪ್ಪವಿರಲಿಕ್ಕೆ ಮದ್ಯ ಪಾನಗಳೇಕೆ
ಚೆನ್ನಾದಿಕೇಶವನಿರೆ ಮಿನುಗು ದೈವಗಳೇಕೆ || ೩ ||