ಮರುದಂಶರ ಮತ ಪಿಡಿಯದೆ

ರಚನೆಕಾರ: ಶ್ರೀಪಾದರಾಜರು

ವರ್ಗ: ಉಪದೇಶಾತ್ಮಕ

ಮರುದಂಶರ ಮತ ಪಿಡಿಯದೆ ಇಹ-
ಪರದಲ್ಲಿ ಸುಖವಿಲ್ಲವಂತೆ || ಪ ||

ಅರಿತು ವಿವೇಕದಿ ಮರೆಯದೆ ನಮ್ಮ
ಗುರುರಾಯರ ನಂಬಿ ಬದುಕಿರೋ || ಅ.ಪ. ||

ಕ್ಷೀರವ ಕರೆದಿಟ್ಟ ಮಾತ್ರದಿ ಸಂಸ್ಕಾರವಿಲ್ಲದೆ
ಘೃತವಾಗದಂತೆ
ಸೂರಿಜನರ ಸಂಗವಿಲ್ಲದೆ ಸಾರವೈರಾಗ್ಯ
ಭಾಗ್ಯ ಪುಟ್ಟದಂತೆ || ೧ ||

ಉಪದೇಶವಿಲ್ಲದ ಮಂತ್ರ ಏಸು ಜಪಿಸಲು
ಫಲಗಳ ಕೊಡದಂತೆ
ಉಪವಾಸ ವ್ರತಗಳಿಲ್ಲದೆ ಜೀವ
ತಪಸಿಯೆನಿಸಿಕೊಳ್ಳಲರಿಯನಂತೆ || ೨ ||

ಸಾರಮಧ್ವಶಾಸ್ತ್ರವೋದದೆ ಗುರು
ತಾರತಮ್ಯ ಸುಜ್ಞಾನ ಪುಟ್ಟದಂತೆ
ಶ್ರೀರಂಗವಿಠಲನ ಭಜಿಸದೆ ಮುಂದೆ
ಪರಮಗತಿ ದೊರಕೊಳ್ಳದಂತೆ || ೩ ||