ಮುರಳಿಯ ನಾದವ ಕೇಳಿ

ರಚನೆಕಾರ: ವಿದ್ಯಾಪ್ರಸನ್ನ ತೀರ್ಥರು

ವರ್ಗ: ಶ್ರೀಕೃಷ್ಣ

ಮುರಳಿಯ ನಾದವ ಕೇಳಿ ಬನ್ನಿ || ಪ ||

ಮುರಳಿಯ ನಾದವ ಕೇಳಿ || ಅ.ಪ ||

ಮಧುರಾನಾಥನು ಮುರಳಿಯನೂದಲು
ಸುರಿವುದಾನಂದಜಲ ನಯನದಲಿ || ೧ ||

ಕಂಗೊಳಿಸುವ ಬೆಳದಿಂಗಳ ಸೊಬಗಿನಲಿ
ತಂಗಾಳಿಯ ಸುಖದಿ ಶ್ರೀರಂಗನ || ೨ ||

ಶ್ಯಾಮಲಾಂಗನು ತನ್ನ ಕೋಮಲ ಕರದಲಿ
ಆ ಮುರಳಿಯ ಪಿಡಿಯೆ ಹೃದಯದಲಿ
ಪ್ರೇಮವು ತುಂಬುವುದು || ೩ ||

ಪಂಚಬಾಣನ ಪಿತ ಮುರಳಿಯ ಮಧುರಸ
ಹಂಚಲೆ ಮಗೆ ರೋಮಾಂಚವಾಗುವುದು || ೪ ||

ರಜನೀಕಾಂತನ ಕುಲದಲಿ ಜನಿಸಿ
ವ್ರಜಜನಗಳಿಗಧಿಕ ಪ್ರಸನ್ನನ || ೫ ||