ನಡತೆ ಹೀನನಾದರೇನಯ್ಯ

ರಚನೆಕಾರ: ಕನಕದಾಸರು

ವರ್ಗ: ಉಪದೇಶಾತ್ಮಕ

ನಡತೆ ಹೀನನಾದರೇನಯ್ಯ ಜಗ
ದೊಡೆಯನ ಭಕುತಿ ಇದ್ದರೆ ಸಾಲದೆ || ಪ ||

ಪುಂಡರಾ ಪಾಂಡುನಂದನರು ಮತ್ತದರೊಳು
ಕಂಡೋರ್ವಳೈವರು ಭೋಗಿಪರು
ಖಂಡಿಸಿದರು ರಣದೊಳು ಗುರುಹಿರಿಯರ
ಪುಂಡರೀಕಾಕ್ಷನ ಒಲುಮೆಯೊಂದಲ್ಲದೆ || ೧ ||

ಒಂದೊಂದು ಪರಿ ಬುದ್ಧಿಯ ಹೇಳಿ ಹಿರಣ್ಯಕ
ಕಂದನ ನಿರ್ಬಂಧಿಸುತಿರಲು
ಅಂದು ಸಾಧಿಸಲು ಕಂಬದ ಬಳಿಯೆ ತನ್ನ
ತಂದೆಯ ಕೊಲಿಸಿದನೆಂಬರು ಜನರು || ೨ ||

ದಾಸಿಯ ಜಠರದೊಳು ಜನಿಸಿದ ವಿದುರ ಸ
ನ್ಯಾಸಿಯೆಂದೆನಿಸಿಕೊಂಡ
ಸಾಸಿರನಾಮದೊಡೆಯ ಕೃಷ್ಣ ಬಾಡದಾದಿ
ಕೇಶವನ ಭಕುತಿಯೊಂದಿದ್ದರೆ ಸಾಲದೆ || ೩ ||