ನಲಿದಾಡೆ ಎನ್ನ ನಾಲಿಗೆ ಮೇಲೆ

ರಚನೆಕಾರ: ಶ್ರೀಪಾದರಾಜರು

ವರ್ಗ: ಸರಸ್ವತಿ

ನಲಿದಾಡೆ ಎನ್ನ ನಾಲಿಗೆ ಮೇಲೆ - ಶಾರದಾ ದೇವಿ
ಕುಣಿದಾಡೇ ಎನ್ನ ನಾಲಿಗೆ ಮೇಲೆ || ಪ ||

ಘಿಲು ಘಿಲು ಘಿಲು ಗೆಜ್ಜೆಯ ನಾದ ಪೊಳೆವ ಅಂದುಗೆ
ರುಳಿ ಪೈಜಣವಿಟ್ಟು ಪುಟ್ಟ ಪಾದ ಸುರವರನುತ ಪಾದ

ಸರಸಿಜೋದ್ಭವನ ವದನ ನಿಲಯಳೆ
ಕರುಣದಿಂದ ಪರಿಪಾಲಿಸು ಮಾತೆ. || ೧ ||

ನಸುನಗೆ ಮುಖವು ನಾಸಾಭರಣ - ಎಸೆವ ಕಪೋಲ
ಹೊಸ ಮುತ್ತಿನ ಚಳ್ಳ ತುಂಬಿಟ್ಟಾ ಶ್ರವಣ

ತಿಲಕವು ಹಸನ ಶಶಿಸೂರ್ಯರ ಆಭರಣ ಶೋಭಿತಳೆ
ಕುಸುಮ ಮುಡಿದ ಮೂರ್ಧಜವುಳ್ಳವಳೇ || ೨ ||

ಶೃಂಗಾರವಾದ ಜಡೆ ಬಂಗಾರ ರಾಗುಟಿ ಚೌರಿ
ಹೊಂಗ್ಯಾದಿ ಗೊಂಡೆ ಮುತ್ತಿನ ಹಾರ ರಂಗು ಮನೋಹರ

ಮಂದಗಮನೆ ಅರವಿಂದ ನಯನೆ ಶ್ರೀ
ರಂಗವಿಠಲನ ತೋರೆ ಶುಭಾಂಗೀ. || ೩ ||