ನಂಬಿದೆ ನಿನ್ನ ಪಾದವ ವೆಂಕಟರಮಣ

ರಚನೆಕಾರ: ಪುರಂದರದಾಸರು

ವರ್ಗ: ಶ್ರೀನಿವಾಸ

ನಂಬಿದೆ ನಿನ್ನ ಪಾದವ, ವೆಂಕಟರಮಣ
ನಂಬಿದೆ ನಿನ್ನ ಪಾದವ || ಪ ||

ನಂಬಿದೆ ನಿನ್ನ ಪಾದಾಂಬುಜಯುಗಳವ
ಚಂದದಿ ಸಲಹೋ ಮಂದರಧರನೆ || ಅ.ಪ ||

ತಂದೆಯಾಗಿ ನೀನೇ ತಾಯಿಯು ನೀನೇ
ಬಂಧುಬಳಗವು ನೀನೇ
ಬಂದ ದುರಿತವೆಲ್ಲ ಹೊಂದಿಕೊಳ್ಳದಂತೆ
ಬಂದೆನ್ನ ಸಲಹೋ ಮುಕುಂದಮುರಾರಿ || ೧ ||

ಚಿಕ್ಕಂದು ಮೊದಲು ನಾನು ನಿನ್ನಯ ಪಾದ
ಹೊಕ್ಕು ಜೀವಿಸುತಿಹೆನು
ಘಕ್ಕನೆ ಜ್ಞಾನವ ಅಕ್ಕರದಿಂದಲೆ ಕೊಡು
ಮಕ್ಕಳ ಮಾಣಿಕ್ಯ ರುಕ್ಮಿಣಿಯರಸ || ೨ ||

ಮರೆತು ಮಾಯದೊಳು ಮುಳುಗಿದೆ ಮಾಯ-
ವರಿತು ಅರಿಯದಾದೆ
ಮರೆಯದೆ ಎನ್ನನು ಸಲಹೊ ಕೃಪಾನಿಧಿ
ವರದ ಶ್ರೀವೆಂಕಟ ಪುರಂದರವಿಠಲ || ೩ ||