ನನ್ನಿಂದ ನಾನೇ ಜನಿಸಿ ಬಂದೆನೆ
ರಚನೆಕಾರ: ಕನಕದಾಸರು
ವರ್ಗ: ಉಪದೇಶಾತ್ಮಕ
ನನ್ನಿಂದ ನಾನೇ ಜನಿಸಿ ಬಂದೆನೆ ದೇವ
ಎನ್ನ ಸ್ವತಂತ್ರವು ಲೇಶವಿದ್ದರು ತೋರು || ಪ ||
ನಿನ್ನ ಪ್ರೇರಣೆಯಿಂದ ನಡೆದು ನುಡಿದ ಮೇಲೆ
ನಿನ್ನದು ತಪ್ಪೋ ನನ್ನದು ತಪ್ಪೋ ಪರಮಾತ್ಮ || ಅ.ಪ ||
ಜನನಿಯ ಜಠರದಲಿ ನವಮಾಸ ಪರಿಯಂತ
ಘನದಿ ನೀ ಪೋಷಿಸುತಿರೆ, ನಾನು
ಜನಿಸಲಾರೆನು ಎನೆ ಜನಿಸೆಂದಿಕ್ಕಳದಿಂದ
ವನಜಾಕ್ಷ ನೂಕಿದವನು ನೀನಲ್ಲವೆ || ೧ ||
ಎಲವುಗಳ ಜಂತೆ ಮಾಡಿ ನರಗಳ ಹುರಿಯಿಂ
ಹೊಲಿದು ಚರ್ಮವ ಹೊದಿಸಿ ದೇಹದೊಳು
ಮಲಮೂತ್ರಕೆ ಹೊರದಾರಿ ನಿರ್ಮಿಸಿ ಹೃದಯದಲಿ
ನೆಲಸಿ ಚೇತನವನಿತ್ತವ ನೀನಲ್ಲವೆ || ೨ ||
ಜನಿಸಿದಾರಂಭದಿಂದ ಇಂದಿನ ಪರಿಯಂತ
ಘನಘನ ಪಾಪ ಸುಕರ್ಮಂಗಳನು
ಮನಕೆ ಬೋಧಿಸಿ ಮಾಡಿಸಿ ಮುಂದೆ ಇದನೆಲ್ಲ
ಅನುಭವಿಸುವುದು ಜೀವನೊ ನೀನೊ ದೇವ || ೩ ||
ಅಂಧಕನ ಕೈಲಿ ಕೋಲಿತ್ತು ಕರೆದೊಯ್ಯುವಾ
ಮುಂದಾಳು ತಪ್ಪಿ ಗುಂಡಿಗೆ ಕೆಡಹಲು
ಅಂಧಕನ ತಪ್ಪೊ ಅದು ಮುಂದಾಳಿನ ತಪ್ಪೊ
ಹಿಂದಾಡಬೇಡ ಎನ್ನೊಳು ತಪ್ಪಿಲ್ಲವೊ || ೪ ||
ಕಂದನ ತಾಯಿ ಆಡಿಸುವಾಗ ಅದು ಪೋಗಿ
ಅಂದಿ ಬಾವಿಯ ನೋಡುವುದನು
ಕಂಡುಬಂದು ಬೇಗನೆ ಬಾಚಿ ಎತ್ತಿಕೊಳ್ಳದಿದ್ದರೆ
ಅದು ಕಂದನ ತಪ್ಪೊ ಮಾತೆಯ ತಪ್ಪೊ ಪರಮಾತ್ಮ || ೫ ||
ಭಾರ ನಿನ್ನದೊ ದೂರು ನಿನ್ನದೊ ಕೃಷ್ಣ
ನಾರಿ ಮಕ್ಕಳು ತನುಮನ ನಿನ್ನದಯ್ಯ
ಕ್ಷೀರದೊಳಗದ್ದು ನೀರೊಳಗದ್ದು ಗೋವಿಂದ
ಹೇರನೊಪ್ಪಿಸಿದ ಮೇಲೆ ಸುಂಕವೆ ದೇವ || ೬ ||
ನ್ಯಾಯವಾದರೆ ದುಡುಕು ನಿನ್ನದೊ, ರಂಗ, ಮತ್ತ-
ನ್ಯಾಯವಾದರೆ ಪೇಳುವರಾರು
ಮಾಯಾರಹಿತ ಕಾಗಿನೆಲೆಯಾದಿಕೇಶವ
ಕಾಯಯ್ಯ ತಪ್ಪನೆಣಿಸದೆ ದೇವ || ೭ ||
ಎನ್ನ ಸ್ವತಂತ್ರವು ಲೇಶವಿದ್ದರು ತೋರು || ಪ ||
ನಿನ್ನ ಪ್ರೇರಣೆಯಿಂದ ನಡೆದು ನುಡಿದ ಮೇಲೆ
ನಿನ್ನದು ತಪ್ಪೋ ನನ್ನದು ತಪ್ಪೋ ಪರಮಾತ್ಮ || ಅ.ಪ ||
ಜನನಿಯ ಜಠರದಲಿ ನವಮಾಸ ಪರಿಯಂತ
ಘನದಿ ನೀ ಪೋಷಿಸುತಿರೆ, ನಾನು
ಜನಿಸಲಾರೆನು ಎನೆ ಜನಿಸೆಂದಿಕ್ಕಳದಿಂದ
ವನಜಾಕ್ಷ ನೂಕಿದವನು ನೀನಲ್ಲವೆ || ೧ ||
ಎಲವುಗಳ ಜಂತೆ ಮಾಡಿ ನರಗಳ ಹುರಿಯಿಂ
ಹೊಲಿದು ಚರ್ಮವ ಹೊದಿಸಿ ದೇಹದೊಳು
ಮಲಮೂತ್ರಕೆ ಹೊರದಾರಿ ನಿರ್ಮಿಸಿ ಹೃದಯದಲಿ
ನೆಲಸಿ ಚೇತನವನಿತ್ತವ ನೀನಲ್ಲವೆ || ೨ ||
ಜನಿಸಿದಾರಂಭದಿಂದ ಇಂದಿನ ಪರಿಯಂತ
ಘನಘನ ಪಾಪ ಸುಕರ್ಮಂಗಳನು
ಮನಕೆ ಬೋಧಿಸಿ ಮಾಡಿಸಿ ಮುಂದೆ ಇದನೆಲ್ಲ
ಅನುಭವಿಸುವುದು ಜೀವನೊ ನೀನೊ ದೇವ || ೩ ||
ಅಂಧಕನ ಕೈಲಿ ಕೋಲಿತ್ತು ಕರೆದೊಯ್ಯುವಾ
ಮುಂದಾಳು ತಪ್ಪಿ ಗುಂಡಿಗೆ ಕೆಡಹಲು
ಅಂಧಕನ ತಪ್ಪೊ ಅದು ಮುಂದಾಳಿನ ತಪ್ಪೊ
ಹಿಂದಾಡಬೇಡ ಎನ್ನೊಳು ತಪ್ಪಿಲ್ಲವೊ || ೪ ||
ಕಂದನ ತಾಯಿ ಆಡಿಸುವಾಗ ಅದು ಪೋಗಿ
ಅಂದಿ ಬಾವಿಯ ನೋಡುವುದನು
ಕಂಡುಬಂದು ಬೇಗನೆ ಬಾಚಿ ಎತ್ತಿಕೊಳ್ಳದಿದ್ದರೆ
ಅದು ಕಂದನ ತಪ್ಪೊ ಮಾತೆಯ ತಪ್ಪೊ ಪರಮಾತ್ಮ || ೫ ||
ಭಾರ ನಿನ್ನದೊ ದೂರು ನಿನ್ನದೊ ಕೃಷ್ಣ
ನಾರಿ ಮಕ್ಕಳು ತನುಮನ ನಿನ್ನದಯ್ಯ
ಕ್ಷೀರದೊಳಗದ್ದು ನೀರೊಳಗದ್ದು ಗೋವಿಂದ
ಹೇರನೊಪ್ಪಿಸಿದ ಮೇಲೆ ಸುಂಕವೆ ದೇವ || ೬ ||
ನ್ಯಾಯವಾದರೆ ದುಡುಕು ನಿನ್ನದೊ, ರಂಗ, ಮತ್ತ-
ನ್ಯಾಯವಾದರೆ ಪೇಳುವರಾರು
ಮಾಯಾರಹಿತ ಕಾಗಿನೆಲೆಯಾದಿಕೇಶವ
ಕಾಯಯ್ಯ ತಪ್ಪನೆಣಿಸದೆ ದೇವ || ೭ ||