ನಾರಾಯಣ ಎನ್ನಿರೋ

ರಚನೆಕಾರ: ಪುರಂದರದಾಸರು

ಗಾಯನ: ಶಶಿಕಾಂತ ರಾವ್

ವರ್ಗ: ವಿಷ್ಣು

ನಾರಾಯಣ ಎನ್ನಿರೋ
ಶ್ರೀ ನರಹರಿ ಪಾರಾಯಣ ಮಾಡಿರೋ || ಪ ||

ನಾರಾಯಣನೆಂದು ಅಜಾಮಿಳನು ಕೈವಲ್ಯ
ಸೇರಿದನೆಂಬೊ ಸುದ್ದಿಯ ಕೇಳಿ ಅರಿಯಿರಾ || ಅ.ಪ ||

ಕಾಶಿಗೆ ಹೋಗಲೇಕೆ, ಕಾವಡಿ ಪೊತ್ತು
ಬೇಸತ್ತು ತಿರುಗಲೇಕೆ
ವಾಸುದೇವನ ನಾಮ ಬಾಯ್ತುಂಬ ನೆನೆದರೆ
ಕ್ಲೇಶಗಳೆಂಬುದನು ಲೇಶ ಮಾತ್ರವಿಲ್ಲದೆ || ೧ ||

ಚೋರರ ಭಯವಿಲ್ಲವೊ, ಹರಿನಾಮಕ್ಕೆ
ಯಾರ ಅಂಕೆಯಿಲ್ಲವೊ
ಊರನಾಳುವ ದೊರೆ ನೀತಿ ಭೀತಿಗಳಿಲ್ಲ
ಘೋರಪಾತಕವೆಲ್ಲ ದೂರ ಮಾಡುವುದಕ್ಕೆ || ೨ ||

ಸ್ನಾನವ ಮಾಡಲೇಕೆ, ಮಾನವರಿಗೆ
ಮೌನ ಮಂತ್ರಗಳೇಕೆ
ದೀನಪಾಲಕ ನಮ್ಮ ಬೆಟ್ಟದೊಡೆಯನ
ಧ್ಯಾನಕೆ ಸರಿಯುಂಟೆ ಪುರಂದರವಿಠಲನ || ೩ ||