ನೀ ಮಾಯೆಯೊಳಗೊ

ರಚನೆಕಾರ: ಕನಕದಾಸರು

ವರ್ಗ: ಶ್ರೀಕೃಷ್ಣ

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ || ಪ ||

ನೀ ದೇಹದೊಳಗೊ ನಿನ್ನೊಳು ದೇಹವೊ || ಅ.ಪ ||

ಬಯಲೊಳಗೆ ಆಲಯವೊ ಆಲಯದೊಳಗೆ ಬಯಲೊ
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ಧಿಯೊಳಗೊ ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ || ೧ ||

ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಗಳೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನೊಳಗೊ ಮನಸು ಜಿಹ್ವೆಯೊಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ || ೨ ||

ಕುಸುಮದಲಿ ಗಂಧವೊ ಗಂಧದಲಿ ಕುಸುಮವೊ
ಕುಸುಮಗಂಧಗಳೆರಡು ಆಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ ಹರಿಯೆ || ೩ ||