ನೀನೆ ದಯಾಳೊ ನಿರ್ಮಲಚಿತ್ತ ಗೋವಿಂದ

ರಚನೆಕಾರ: ಪುರಂದರದಾಸರು

ಗಾಯನ: ಶಶಿಕಾಂತ ರಾವ್

ವರ್ಗ: ಶ್ರೀನಿವಾಸ

ನೀನೇ ದಯಾಳೊ ನಿರ್ಮಲ ಚಿತ್ತ ಗೋವಿಂದ |
ನಿಗಮಗೋಚರ ಮುಕುಂದ || ಪ ||

ಜ್ಞಾನಿಗಳರಸ ನೀನಲ್ಲದೆ ಜಗಕಿನ್ನು |
ಮಾನದಿಂದಲಿ ಕಾಯ್ವ ದೊರೆಗಳ ನಾ ಕಾಣೆ || ಅ.ಪ ||

ದಾನವಾಂತಕ ದೀನಜನ ಮಂದಾರನೇ |
ಧ್ಯಾನಿಪರ ಮನ ಸಂಚಾರನೇ ||
ಮೌನನಾದೆನು ನಿನ್ನ ಧ್ಯಾನಾನಂದದಿ ಈಗ |
ಸಾನುರಾಗದಿ ಕಾಯೋ ಸನಕಾದಿ ವಂದ್ಯನೇ || ೧ ||

ಬಗೆ ಬಗೆಯಲಿ ನಿನ್ನ ಸ್ತುತಿಪೆನೋ ನಗಧರ |
ಖಗಪತಿ ವಾಹನನೇ ||
ಮಗುವಿನ ಮಾತೆಂದು ನಗುತ ಕೇಳಿ ನೀನು |
ಬೇಗದಿಂದಲಿ ಕಾಯೋ ಸಾಗರ ಶಯನನೇ || ೨ ||

ಮಂದರಧರ ಅರವಿಂದಲೋಚನ ನಿನ್ನ |
ಕಂದನೆಂದೆನಿಸೋ ಎನ್ನ ||
ಸಂದೇಹವೇಕಿನ್ನು ಸ್ವಾಮಿ ಮುಕುಂದನೇ |
ಬಂದೆನ್ನ ಕಾಯೋ ಶ್ರೀ ಪುರಂದರವಿಠ್ಠಲನೇ || ೩ ||