ನೇಮವಿಲ್ಲದ ಹೋಮವೇತಕಯ್ಯ

ರಚನೆಕಾರ: ಕನಕದಾಸರು

ವರ್ಗ: ಉಪದೇಶಾತ್ಮಕ

ನೇಮವಿಲ್ಲದ ಹೋಮವೇತಕಯ್ಯ
ರಾಮನಾಮವಲ್ಲದೆ ಮತ್ತೆ ನಮಗೊಂದೆ || ಪ ||

ನೀರ ಮುಳುಗಲೇಕೆ ನಾರಿಯ ಬಿಡಲೇಕೆ
ವಾರಕೊಂದು ಉಪವಾಸ ಇರಲೇತಕೆ
ನಾರಸಿಂಹನ ದಿವ್ಯನಾಮವನು ನೆನೆದರೆ
ಘೋರ ಪಾತಕವೆಲ್ಲ ತೊಲಗಿ ಹೋಗುವುದು || ೧ ||

ಅಂಬರದೊಳಿರಲೇಕೆ ತಾಂಬೂಲವ ಬಿಡಲೇಕೆ
ಡಂಬಕತನದಲಿ ಇರಲೇತಕೆ
ಅಂಬುಜನಾಭನನು ಭಾವದಲಿ ನೆನೆದರೆ
ಇಂಬುಂಟು ವೈಕುಂಠಪುರದೊಳಗಯ್ಯ || ೨ ||

ಬಂಧದೊಳಗೆ ಬಿದ್ದು ಹರಿಯನೆ ನೆನೆಯುತಿರೆ
ಬೆಂದು ಹೋಗುವುದು ದುರಿತಂಗಳೆಲ್ಲ
ಬಂದ ಪಾಪಗಳೆಲ್ಲ ನಿಲ್ಲದೆ ಕಳೆದಾವು
ಚಂದಾಗಿ ನೆಲೆಯಾದಿಕೇಶವನ ನೆನೆಯೊ || ೩ ||