ಪ್ರಾಣದೇವ ನೀನಲ್ಲದೆ

ರಚನೆಕಾರ: ಜಗನ್ನಾಥದಾಸರು

ವರ್ಗ: ಹನುಮಂತ

ಪ್ರಾಣದೇವ ನೀನಲ್ಲದೆ ಕಾಯ್ವರ ಕಾಣೆನು ಜಗದೊಳಗೆ ಮುಖ್ಯ || ಪ ||

ಪ್ರಾಣಾಪಾನ ವ್ಯಾನೋದಾನ ಸಮಾನನೆನಿಪ ಮುಖ್ಯ || ಅ.ಪ ||

ವಾಸವ ಕುಲಿಶದಿ ಘಾಸಿಸೆ ಜೀವರ ತ್ರಾಸ ನಿರೋಧಿಸಿದೆ |
ಆ ಸಮಯದಿ ಕಮಲಾಸನ ಪೇಳಲು ನೀ ಸಲಹಿದೆ ಜಗವಾ || ೧ ||

ಅಂಗದ ಪ್ರಮುಖ ಪ್ಲವಂಗರು ರಾಮನ ಅಂಗನೆಯಳ ಹುಡುಕೆ |
ತಿಂಗಳು ಮೀರಲು ಕಂಗೆಡೆ ಕಪಿವರ ಪುಂಗವ ಪಾಲಿಸಿದೇ || ೨ ||

ಪಾವಿನ ಪಾಶದಿ ರಾವಣಿ ನೀಲ ಸುಗ್ರೀವ ಮುಖ್ಯರ ಬಿಗಿಯೇ |
ಸಾವಿರಗಾವುದ ದೂರದಲ್ಲಿದ ಸಂಜೀವನವ ತಂದೆ || ೩ ||

ಪರಿಸರ ನೀನಿರೆ ಹರಿತಾನಿಪ್ಪನು ಇರದಿರೆ ತಾನಿರನು |
ಕರಣ ನಿಯಾಮಕ ಸುರರ ಗುರುವೇ ನೀ ಕರುಣಿಸೆ ಕರುಣಿಸುವಾ || ೪ ||

ಭೂತೇಂದ್ರಿಯಂಗಳಧಿನಾಥ ನಿಯಾಮಕ ನಾತೈಜಸಹರನ |
ತಾತನೆನಿಪ ಜಗನ್ನಾಥ ವಿಠಲ ಪ್ರೀತಿಪಾತ್ರನಾದೆ || ೫ ||