ಸತ್ಯವಂತರ ಸಂಗವಿರಲು

ರಚನೆಕಾರ: ಕನಕದಾಸರು

ವರ್ಗ: ಉಪದೇಶಾತ್ಮಕ

ಸತ್ಯವಂತರ ಸಂಗವಿರಲು ತೀರ್ಥವೇತಕೆ
ನಿತ್ಯ ಅನ್ನದಾನವಿರಲು ಭಯವು ಏತಕೆ || ಪ ||

ಗುರುಹಿರಿಯರ ಅರಿಯದವನ ಅರಿವದೇತಕೆ
ಪರಹಿತಾರ್ಥಕಿಲ್ಲದವನ ಶರೀರವೇತಕೆ
ಹರಿಯ ಪೂಜೆ ಮಾಡದವನ ಜನುಮವೇತಕೆ
ಸೇರಿದವರ ಹೊರೆಯದಂಥ ದೊರೆಯು ಏತಕೆ || ೧ ||

ಮಾತು ಕೇಳದೆ ಮಲೆತು ನಡೆವ ಮಕ್ಕಳೇತಕೆ
ಭೀತನಾಗಿ ಓಡಿಬರುವ ಬಂಟಾನೇತಕೆ
ಪ್ರೀತಿ ಇಲ್ಲದೆ ಎಡೆಯನಲಿಕ್ಕಿದ ಊಟವೇತಕೆ
ಸೋತು ಹೆಣ್ಣಿಗೆ ಹೆದರಿ ನಡೆಯದ ಸುಗುಣನೇತಕೆ || ೨ ||

ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ
ಮಾನಹೀನನಾಗಿ ಬಾಳ್ವ ಮನುಜನೇತಕೆ
ನುಣ ಹೆಚ್ಚು ನೋಡುವಲ್ಲಿ ಇರುವುದೇತಕೆ
ತನ್ನ ಬಳಗವೆರಸಿ ಉಣ್ಣದ ಭಾಗ್ಯವೇತಕೆ || ೩ ||

ತಾನು ತನ್ನನರಿಯದಂಥ ಪ್ರೌಢನೇತಕೆ
ಸ್ನಾನ ಸಂಧ್ಯಾನವಿಲ್ಲದ ಶೀಲವೇತಕೆ
ಜ್ಞಾನವಿಲ್ಲದೆ ನೂರುಕಾಲ ಬದುಕಲೇತಕೆ
ಧ್ಯಾನದೊಳಗೆ ಕೃಷ್ಣನಿಲ್ಲದ ತನುವಿದ್ದೇತಕೆ || ೪ ||

ಸಂಜ್ಞೆಯರಿತು ನಡೆಯದಿರುವ ಸತಿ ಇದ್ದೇತಕೆ
ಭಿನ್ನವರಿತು ನಡೆಯದಂಥ ಸ್ನೇಹವೇತಕೆ
ಮುನ್ನ ಕೊಟ್ಟು ಪಡೆಯಲಿಲ್ಲ ಬಯಸಲೇತಕೆ
ಚೆನ್ನ ಆದಿಕೇಶವನಿರಲು ಬೇರೆ ದೈವವೇತಕೆ || ೫ ||