ಶರಣು ಸಿದ್ಧಿ ವಿನಾಯಕ

ರಚನೆಕಾರ: ಪುರಂದರದಾಸರು

ಗಾಯನ: ಸುನೀತ

ವರ್ಗ: ಗಣೇಶ

ಶರಣು ಶರಣು ಶರಣು ಶರಣು ಸಿದ್ಧಿ ವಿನಾಯಕ
ಶರಣು ವಿದ್ಯಾಪ್ರದಾಯಕ || ಪ ||

ಶರಣು ಪಾರ್ವತಿ ತನಯ ಮೂರುತಿ
ಶರಣು ಮೂಷಿಕ ವಾಹನ || ಅ.ಪ. ||

ನಿಟಿಲ ನೇತ್ರನ ದೇವಿಸುತನೆ
ನಾಗಭೂಷಣ ಪ್ರೀಯನೇ |
ಕಟಿತಟಾಂಕಿತ ಕೋಮಲಾಂಗನೆ
ಕರ್ಣಕುಂಡಲ ಧಾರನೆ || ೧ ||

ಬಟ್ಟ ಮುತ್ತಿನ ಹಾರಪದಕನೆ
ಬಾಹು ಹಸ್ತ ಚತುಷ್ಕನೇ |
ಇಟ್ಟ ತೊಡುಗೆಯ ಹೇಮ ಕಂಕಣ
ಪಾಶ ಅಂಕುಶ ಧಾರನೆ || ೨ ||

ಕುಕ್ಷಿ ಮಹಾಲಂಬೋದರನೆ
ಇಕ್ಷು ಚಾಪನ ಗೆಲಿದನೇ |
ಪಕ್ಷಿವಾಹನ ಶ್ರೀಪುರಂದರ
ವಿಠಲನ ನಿಜ ದಾಸನೆ || ೩ ||