ಶ್ರೀನಿವಾಸ ನೀನೇ ಪಾಲಿಸೋ

ರಚನೆಕಾರ: ಪುರಂದರದಾಸರು

ಗಾಯನ: ಶಶಿಕಾಂತ ರಾವ್

ವರ್ಗ: ಶ್ರೀನಿವಾಸ

ಶ್ರೀನಿವಾಸ ನೀನೇ ಪಾಲಿಸೋ ಶ್ರಿತಜನಪಾಲ
ಗಾನಲೋಲ ಶ್ರೀ ಮುಕುಂದನೇ || ಪ ||

ಧ್ಯಾನ ಮಾಳ್ಪ ಸಜ್ಜನರ ಮಾನದಿಂದ ಪರಿಪಾಲಿಪ
ವೇಣುಗೋಪಾಲ ಗೋವಿಂದ ವೇದವೇದಾಂತ ನಿತ್ಯಾನಂದ || ಅ.ಪ ||

ಎಂದಿಗೆ ನಿನ್ನ ಪಾದಾಬ್ಜವ ಪುಂದುವ ಸುಖ
ಎಂದಿಗೆ ಲಭ್ಯವೋ ಮಾಧವ |
ಅಂಧಕಾರಣ್ಯದಲಿ ನಿಂದು ತತ್ತರಿಸುತಿಹೆನು
ಅಂದದಿಂ ಭವಾಬ್ಧಿಯೊಳು ನಿಂದು ನೊಂದೆನೋ ಮುಕುಂದ || ೧ ||

ಎಷ್ಟು ದಿನ ಕಷ್ಟಪಡುವುದೊ ಯಶೋದೆ ಕಂದ
ದೃಷ್ಟಿಯಿಂದ ನೋಡಲಾಗದೆ |
ಮುಟ್ಟಿ ನಿನ್ನ ಭಜಿಸಲಾರೆ ಕೆಟ್ಟ ನರಜನ್ಮದವ
ದುಷ್ಟ ಕಾರ್ಯ ಮಾಡಿದಾಗ್ಯೋ ಇಷ್ಟನಾಗಿ ಕೈಯ ಪಿಡಿದು || ೨ ||

ಅನುದಿನ ಅನೇಕ ರೋಗಂಗಳ ಅನುಭವಿಸಿದೆನು
ಘನ ಮಹಿಮ ನೀನೆ ಕೇಳಯ್ಯ |
ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲಹೆನ್ನ
ಹನುಮದೀಶ ಪುರಂದರ ವಿಠಲನೇ ಕೈಯ ಪಿಡಿದು || ೩ ||