ಸುಮ್ಮನೆ ವೈಷ್ಣವನೆಂಬಿರಿ

ರಚನೆಕಾರ: ಶ್ರೀಪಾದರಾಜರು

ವರ್ಗ: ಉಪದೇಶಾತ್ಮಕ

ಸುಮ್ಮನೆ ವೈಷ್ಣವನೆಂಬಿರಿ ಪರ ಬೊಮ್ಮ
ಸುಜ್ಞಾನವನರಿಯದ ಮನುಜನ || ಪ ||

ಮುಖವ ತೊಳೆದು ನಾಮವನಿಟ್ಟೆನಲ್ಲದೆ
ಸುಖತೀರ್ಥಶಾಸ್ತ್ರವನೋದಿದನೆ
ಸುಖಕೆ ಶೃಂಗಾರಕೆ ಮಾಲೆ ಹಾಕಿದನಲ್ಲದೆ
ಭಕುತಿ ರಸದಲ್ಲಿ ಮುಳುಗಿದೆನೇನಯ್ಯ || ೧ ||

ಊರು ಮಾತುಗಳಾಡಿ ದಣಿದೆನಲ್ಲದೆ
ನಾರಾಯಣ ಕೃಷ್ಣ ಶರಣೆಂದೆನೆ
ನಾರಿಯ ನುಡಿ ಕೇಳಿ ಮರುಳಾದೆನಲ್ಲದೆ
ಗುರುಹಿರಿಯರ ಮಾತ ಮನ್ನಿಸಿದೆನೇನಯ್ಯ || ೨ ||

ನರೋತ್ತಮರಿಗಧಿಕ ಗಂಧರ್ವರಿಗಧಿಕ
ಸುರೇಂದ್ರಗಧಿಕ ಹರಗಧಿಕ
ವಿರಿಂಚಿಗಧಿಕ ಸಿರಿಗಧಿಕ
ಹರಿ ಸರ್ವೋತ್ತಮನೆಂದು ತಿಳಿದೆನೇನಯ್ಯ || ೩ ||

ಜಗತು ಸತ್ಯವೆಂದು ಪಂಚಭೇದವ ತಿಳಿದು
ಮಿಗೆ ರಾಗದ್ವೇಷಂಗಳನು ವರ್ಜಿಸಿ
ಭಗವಂತನ ಲೀಲೆ ಶ್ರವಣ ಕಥೆಗಳಿಂದ
ನಿಗಮಗೋಚರನೆಂದು ತಿಳಿದೆನೇನಯ್ಯ || ೪ ||

ಗಂಗೆಯಲಿ ಮೈ ಬಣ್ಣ ತೊಳೆದೆನಲ್ಲದೆ
ಭವಹಿಂಗುವ ಸ್ನಾನವ ಮಾಡಿದೆನೆ
ರಂಗವಿಠಲನ ನಿಜವಾದ ದಾಸರ
ಸಂಗ ಸುಖವೆಂದು ತಿಳಿದೆನೇನಯ್ಯ || ೫ ||