ತಲ್ಲಣಿಸದಿರು ಕಂಡ್ಯ

ರಚನೆಕಾರ: ಕನಕದಾಸರು

ವರ್ಗ: ಉಪದೇಶಾತ್ಮಕ

ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೆ ಸಂಶಯ ಬೇಡ || ಪ ||

ಬೆಟ್ಟದ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರು
ಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು
ಗಟ್ಯಾಗಿ ಸಲಹುವನು ಇದಕೆ ಸಂಶಯವಿಲ್ಲ || ೧ ||

ಅಡವಿಯೊಳಗೆ ಮೃಗ ಪಕ್ಷಿಗಳಿಗೆಲ್ಲ
ಅಡಿಗಡಿಗೆ ಆಹಾರವಿತ್ತವರು ಯಾರೊ
ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಪನು ಇದಕೆ ಸಂಶಯವಿಲ್ಲ || ೨ ||

ನವಿಲಿಗೆ ಚಿತ್ರ ಬರೆದವರು ಯಾರು
ಪವಳದ ಲತೆಗೆ ಕೆಂಪಿಟ್ಟವರು ಯಾರು
ಸವಿಮಾತಿನ ಗಿಳಿಗೆ ಹಸುರು ಬರೆದವರು ಯಾರು
ಅವನೇ ಸಲಹುವನು ಇದಕೆ ಸಂಶಯವಿಲ್ಲ || ೩ ||

ಕಲ್ಲಿನಲ್ಲಿ ಹುಟ್ಟಿ ಕೂಗುವ ಕಪ್ಪೆಗಳಿಗೆಲ್ಲ
ಅಲ್ಲಲ್ಲಿಗಾಹಾರವನ್ನು ತಂದಿತ್ತವರು ಯಾರು
ಬಲ್ಲಿದನು ಕಾಗಿನೆಲೆಯಾದಿಕೇಶವರಾಯ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ || ೪ ||