ತೂಗಿರೆ ರಾಯರ

ರಚನೆಕಾರ: ಜಗನ್ನಾಥದಾಸರು

ವರ್ಗ: ರಾಘವೇಂದ್ರ ಸ್ವಾಮಿ

ತೂಗಿರೆ ರಾಯರ ತೂಗಿರೆ ಗುರುಗಳ
ತೂಗಿರೆ ಯತಿಕುಲ ತಿಲಕರ || ಪ ||

ತೂಗಿರೆ ಯೋಗೀಂದ್ರ ಕರಕಮಲ ಪೂಜ್ಯರ
ತೂಗಿರೆ ಗುರು ರಾಘವೇಂದ್ರರ || ಅ.ಪ ||

ಕುಂದನಮಯವಾದ ಚಂದದ ತೊಟ್ಟಿಲೊಳ್
ಆನಂದದಿ ಮಲಗ್ಯಾರ ತೂಗಿರೆ
ನಂದನಕಂದ ಗೋವಿಂದ ಮುಕುಂದನ
ಚಂದದಿ ಭಜಿಪರ ತೂಗಿರೆ || ೧ ||

ಯೋಗನಿದ್ರೆಯಾನ ಬೇಗನೆ ಮಾಡುವ
ಯೋಗೀಶ್ಯ ವಂದ್ಯರ ತೂಗಿರೆ
ಭೋಗಿಶಯನನ ಪಾದ
ಮೋದದಿ ಭಜಿಪರ ಭಾಗವತರನ್ನ ತೂಗಿರೆ || ೨ ||

ಅದ್ವೈತ ಮತದ ವಿದ್ವಂಸದ ನಿಜಗುರು
ಮಧ್ವಮತೋದ್ಧಾರನ ತೂಗಿರೆ
ಶುದ್ಧ ಸಂಕಲ್ಪದಿ ಬಂದ ನಿಜಭಕ್ತರ
ಉದ್ಧಾರಮಾಳ್ಪರ ತೂಗಿರೆ || ೩ ||

ಭಜಕ ಜನರು ತಮ್ಮ ಭಜನೆಯ ಮಾಡಲು
ನಿಜಗತಿ ಇಬ್ಬರ ತೂಗಿರೆ
ನಿಜಗುರು ಜಗನ್ನಾಥ ವಿಠಲನ ಪಾದವ
ಭಜನೆಯ ಮಾಳ್ಪರನ ತೂಗಿರೆ || ೪ ||