ವರವ ಕೊಡು ಎನಗೆ

ರಚನೆಕಾರ: ಕನಕದಾಸರು

ವರ್ಗ: ಸರಸ್ವತಿ

ವರವ ಕೊಡು ಎನಗೆ ವಾಗ್ದೇವಿ ನಿನ್ನ
ಚರಣಕಮಲಂಗಳನ ದಯಮಾಡು ದೇವಿ || ಪ ||

ಶಶಿಮುಖದ ನಸುನಗೆಯ ಬಾಲೆ
ಎಸೆವ ಕರ್ಣದ ಮುತ್ತಿನೋಲೆ
ನಸುನಗುವ ಸುಲಿಪಲ್ಲ ಗುಣಶೀಲೆ ದೇವಿ
ಬಿಸಜಾಕ್ಷಿ ಎನ್ನ ಹೃದಯದೊಳು ನಿಂದು || ೧ ||

ಇಂಪು ಸೊಂಪಿನ ಚಂದ್ರಬಿಂಬೆ
ಕೆಂಪು ತುಟಿಗಳ ನಾಸಿಕದ ರಂಭೆ
ಜೋಂಪು ಮದನನ ಪೂರ್ಣಶಕ್ತಿ ಗೊಂಬೆ ಒಳ್ಳೆ
ಸಂಪಿಗೆಯ ಮುಡಿಗಿಟ್ಟು ರಾಜಿಪ ಶಾರದಾಂಬೆ || ೨ ||

ರವಿಕೋಟಿ ತೇಜಪ್ರಕಾಶೇ ಮಹಾ
ಕವಿಜನರ ಹೃತ್ಕಮಲ ವಾಸೇ
ಅವಿರಳಪುರಿಯ ಸಿರಿಕಾಗಿನೆಲೆಯಾದಿಕೇಶವನ
ಸುತನಿಗೆ ಸನ್ನುತ ರಾಣಿವಾಸೆ || ೩ ||