ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ

ರಚನೆಕಾರ: ಶ್ರೀಪಾದರಾಜರು

ವರ್ಗ: ಉಪದೇಶಾತ್ಮಕ

ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ || ಪ ||

ತೀರ್ಥಪಾದರ ಭಜಿಸಿ ಕೃತಾರ್ಥನಾಗದವನ ಜನ್ಮ || ಅ.ಪ. ||

ಅರುಣ ಉದಯದಲ್ಲಿ ಎದ್ದು ಸರಿತದಲಿ ಸ್ನಾನವ ಮಾಡಿ
ಅರಳುಮಲ್ಲಿಗೆ ಮಾಲೆ ಹರಿಯ ಚರಣಕ್ಕರ್ಪಿಸದವನ ಜನ್ಮ || ೧ ||

ಒಂದು ಶಂಖ ಉದಕ ತಂದು ಚಂದದಿಂದ ಹರಿಗೆ ಎರೆದು
ಗಂಧ ಪುಷ್ಪದಿಂದ ಹರಿಯ ವಂದನೆ ಮಾಡದವನ ಜನ್ಮ || ೨ ||

ಮುಗುಳು ತೆನೆಯಲೆಸೆವ ತುಳಸಿದಳವ ತಂದು ಪ್ರೇಮದಿಂದ
ಜಗನ್ಮಯಗೆ ಅರ್ಪಿಸಿ ಕರವ ಮುಗಿದು ಸ್ತುತಿಸದವನ ಜನ್ಮ || ೩ ||

ಭೋಗಿಶಯನನ ದಿನದಿ ಸಕಲ ಭೋಗಗಳನು ತಾನು ತೊರೆದು
ಭಾಗವತರ ಮ್ಯಾಳದಿಂದ ಜಾಗರಣೆ ಮಾಡದವನ ಜನ್ಮ || ೪ ||

ಜಂಗಮರೊಳಗಧಿಕವನಿಪ ಭಂಗುರ ಮನುಷ್ಯದೇಹ ಪಡೆದು
ರಂಗವಿಠಲನೆನಿಪ ಪಶ್ಚಿಮರಂಗಗರ್ಪಿಸದವನ ಜನ್ಮ || ೫ ||