ಯಾಕೆ ಇಂಥ ದುಡುಕು

ರಚನೆಕಾರ: ಶ್ರೀಪಾದರಾಜರು

ವರ್ಗ: ಶ್ರೀಕೃಷ್ಣ

ಯಾಕೆ ಇಂಥ ದುಡುಕು ಕೃಷ್ಣಯ್ಯ ನಿನ-
ಗೇಕೆ ಇಂಥ ದುಡುಕು
ಪಾಕಶಾಸನ ವಂದ್ಯ ಪೋಕತನಗಳಿನ್ನು
ಸಾಕು ಸಾಕಯ್ಯ ಕೃಷ್ಣ || ಪ ||

ಗೊಲ್ಲ ಬಾಲಕರು ನೀವೆಲ್ಲರು ಕೂಡಿಕೊಂಡು
ಗುಲ್ಲು ಮಾಡದೆ ಮೊಸರೆಲ್ಲ ಸವಿದೆಯಂತೆ ಕೃಷ್ಣ || ೧ ||

ಪೂತನಿ ಮೊಲೆಯನ್ನು ಭೀತಿಯಿಲ್ಲದೆ ಉಂಡು
ಘಾತವ ಮಾಡಿದೆ ಮಾತನಾಡಯ್ಯ ಕೃಷ್ಣ || ೨ ||

ದುಷ್ಟ ಕಂಸನ ನೀನು ಕಷ್ಟವಿಲ್ಲದೆ ಮಡುಹಿ
ಮುಷ್ಟಿಕನ ಕೊಂದೆ ದೃಷ್ಟಿ ತಾಕೀತೆಂದು || ೩ ||

ನಿರ್ಜನ ಸ್ಥಳದಿ ಯಮಳಾರ್ಜುನರನ್ನು ಮಡುಹಿ
ದುರ್ಜನರ ಕೊಂದೆ ಅರ್ಜುನ ಸಾರಥಿ || ೪ ||

ಅಂಗಿ ಟೊಪ್ಪಿಗೆ ಉಂಗುರ ಉಡಿದಾರ
ಶೃಂಗರಿಸಿಕೊಂಡು ರಂಗವಿಠಲ ಬಾರೋ || ೫ ||