ಯಾಕೆ ನೀನಿಲ್ಲಿ ಪವಡಿಸಿದೆ ಹರಿಯೆ
ರಚನೆಕಾರ: ಕನಕದಾಸರು
ವರ್ಗ: ವಿಷ್ಣು
ಯಾಕೆ ನೀನಿಲ್ಲಿ ಪವಡಿಸಿದೆ ಹರಿಯೆ – ಜಗ
ದೇಕ ವಿಖ್ಯಾತ ಪಶ್ಚಿಮ ರಂಗಧಾಮ || ಪ ||
ತಮನೊಡನೆ ಹೋರಿ ಬೆಟ್ಟವನು ಬೆನ್ನಲಿ ಪೊತ್ತು
ರಮಣಿ ಭೂಮಿಯನು ತಂದಾಯಾಸವೊ
ಅಮರವೈರಿಯ ಕರುಳ ಕಿತ್ತ ಕಡು ಧಾವತಿಯೊ
ಕ್ಷಮೆಯನಳೆದೀ ಪಾದಕಮಲ ನೊಂದವೊ || ೧ ||
ಪೊಡವಿಪಾಲಕರ ವಂಶವನು ವಪನ ಮಾಡಿ
ಕೊಡಲಿಯನು ಬಿಸುಟು ಮಲಗಿದ ಭಾವವೊ
ಮಡದಿಯನು ಕದ್ದೊಯ್ದವನ ಶಿರವನೆ ತರಿದು
ಒಡಲಿನಾಯಾಸದಲಿ ಪವಡಿಸಿದ ಪರಿಯೊ || ೨ ||
ವಾಲಿ ಮೊದಲಾದ ಎದುರಾಂತ ವೀರರ ಕೊಂದು
ಕಾಳಿಯ ಹೆಡೆಯ ತುಳಿತುಳಿದು ಮೈಯಲಸಿತೊ
ಲೀಲೆಗೋಸುಗ ಬಂದು ನಿರ್ವಾಣದಲಿ ನಿಂದು
ಆ ಲಜ್ಜೆಗಾಗಿ ತಲೆ ಬಾಗಿ ಮಲಗಿದೆಯೊ || ೩ ||
ನಾಲ್ಕು ಯುಗದಾಧಾರಿ ಕಡೆಗೆ ತುರಗವನೇರಿ
ಸಾಕಾಗಿ ದಣಿದು ನೀನಿಲ್ಲಿ ಮಲಗಿದೆಯೊ
ಸಾಕಾರಿಯಾಗಿ ಗೌತಮ ಮುನೀಶ್ವರನಿಗೆ
ಬೇಕೆಂದು ನೀ ಕೊಟ್ಟ ವರಕೆ ಮಲಗಿದೆಯೊ || ೪ ||
ಇನ್ನೆಷ್ಟು ಕಾಲ ನೀನಿಲ್ಲಿ ಮಲಗಿದ್ದರೂ
ನಿನ್ನನೆಬ್ಬಿಸುವವರನೊಬ್ಬರನು ಕಾಣೆ
ಉನ್ನಂತ ಕಾಗಿನೆಲೆಯಾದಿಕೇಶವರಾಯ
ಚೆನ್ನ ಶ್ರೀರಂಗಪಟ್ಟಣದ ರಂಗಧಾಮ || ೫ ||
ದೇಕ ವಿಖ್ಯಾತ ಪಶ್ಚಿಮ ರಂಗಧಾಮ || ಪ ||
ತಮನೊಡನೆ ಹೋರಿ ಬೆಟ್ಟವನು ಬೆನ್ನಲಿ ಪೊತ್ತು
ರಮಣಿ ಭೂಮಿಯನು ತಂದಾಯಾಸವೊ
ಅಮರವೈರಿಯ ಕರುಳ ಕಿತ್ತ ಕಡು ಧಾವತಿಯೊ
ಕ್ಷಮೆಯನಳೆದೀ ಪಾದಕಮಲ ನೊಂದವೊ || ೧ ||
ಪೊಡವಿಪಾಲಕರ ವಂಶವನು ವಪನ ಮಾಡಿ
ಕೊಡಲಿಯನು ಬಿಸುಟು ಮಲಗಿದ ಭಾವವೊ
ಮಡದಿಯನು ಕದ್ದೊಯ್ದವನ ಶಿರವನೆ ತರಿದು
ಒಡಲಿನಾಯಾಸದಲಿ ಪವಡಿಸಿದ ಪರಿಯೊ || ೨ ||
ವಾಲಿ ಮೊದಲಾದ ಎದುರಾಂತ ವೀರರ ಕೊಂದು
ಕಾಳಿಯ ಹೆಡೆಯ ತುಳಿತುಳಿದು ಮೈಯಲಸಿತೊ
ಲೀಲೆಗೋಸುಗ ಬಂದು ನಿರ್ವಾಣದಲಿ ನಿಂದು
ಆ ಲಜ್ಜೆಗಾಗಿ ತಲೆ ಬಾಗಿ ಮಲಗಿದೆಯೊ || ೩ ||
ನಾಲ್ಕು ಯುಗದಾಧಾರಿ ಕಡೆಗೆ ತುರಗವನೇರಿ
ಸಾಕಾಗಿ ದಣಿದು ನೀನಿಲ್ಲಿ ಮಲಗಿದೆಯೊ
ಸಾಕಾರಿಯಾಗಿ ಗೌತಮ ಮುನೀಶ್ವರನಿಗೆ
ಬೇಕೆಂದು ನೀ ಕೊಟ್ಟ ವರಕೆ ಮಲಗಿದೆಯೊ || ೪ ||
ಇನ್ನೆಷ್ಟು ಕಾಲ ನೀನಿಲ್ಲಿ ಮಲಗಿದ್ದರೂ
ನಿನ್ನನೆಬ್ಬಿಸುವವರನೊಬ್ಬರನು ಕಾಣೆ
ಉನ್ನಂತ ಕಾಗಿನೆಲೆಯಾದಿಕೇಶವರಾಯ
ಚೆನ್ನ ಶ್ರೀರಂಗಪಟ್ಟಣದ ರಂಗಧಾಮ || ೫ ||