ಯಾತರವನೆಂದು

ರಚನೆಕಾರ: ಕನಕದಾಸರು

ವರ್ಗ: ಉಪದೇಶಾತ್ಮಕ

ಯಾತರವನೆಂದು ಸುರಲಿ ಜಗ
ನ್ನಾಥ ಮಾಡಿದ ಒಂದು ನರರೂಪವಯ್ಯ || ಪ ||

ಮುಟ್ಟು ಹುಟ್ಟಿನೊಳು ನೆಟ್ಟನೆ ನಾ ಬಂದೆ
ತೊಟ್ಟಿದ್ದೆನಾಗ ತೊಗಲಬಕ್ಕಣ
ಇಷ್ಟರೊಳಗೆ ಒಂದು ವಿವರವರಿಯದಿಂಥ
ಭ್ರಷ್ಟಗೆ ನನಗಿನ್ಯಾತರ ಕುಲವಯ್ಯ || ೧ ||

ಇಂದ್ರಿಯ ಸುತಕ ದುರ್ಗಂಧದ ಮಲಮೂತ್ರ
ನಿಂದ ಠಾವಲಿ ತನ್ನ ನಿಜವರಿಯದೆ
ಬಂದದ್ದು ಬಚ್ಚಲಗುಣಿ ತಿಂದದ್ದು ಮೊಲೆ ಮಾಂಸ ಇಂಥ
ಅಂಧಕಗೆ ನನಗಿನ್ಯಾತರ ಕುಲವಯ್ಯ || ೨ ||

ಒಂಬತ್ತು ಎಜ್ಜದೊಳೊಸರುವ ಹೊಲಸದು
ತುಂಬಿ ತುಳುಕುವ ಕೊಡವಾಗಿರಲು
ಇಂಬಿಲ್ಲದೆ ಹೊಲೆಗೊಂಡ ಠಾವಿನಲಿ ಬಂದಂಥ
ಡಂಬಕ ನನಗಿನ್ಯಾತರ ಕುಲವಯ್ಯ || ೩ ||

ಕರುಳು ಖಂಡ ನಾರುವ ಚರ್ಮ ರೋಹಿತ
ನರಪಂಜರದೀ ಹುರುಳಿಲ್ಲದ
ನರದೇಹ ಹೊತ್ತು ತಿರುಗುವಂತ
ತಿರುಕ ನನಗಿನ್ಯಾತರ ಕುಲವಯ್ಯ || ೪ ||

ಹಚ್ಚಡದ ಮೇಲೆ ಲಚ್ಚಿಕೆಯಿಟ್ಟಂತೆ
ಹೆಚ್ಚು ಕಡಮೆ ಎಂದು ಹೆಣಗಾಡುತ
ನಿಚ್ಚ ಕಾಗಿನೆಲೆಯಾದಿಕೇಶವನ
ಹುಚ್ಚಗೆ ನನಗಿನ್ಯಾತರ ಕುಲವಯ್ಯ || ೫ ||